ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದ ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ ಮತ್ತೆ ರಾಜಕೀಯ ಪ್ರವೇಶಕ್ಕೆ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಕೋಟೆನಾಡು ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಡೆ ಗಾಲಿ ಜನಾರ್ಧನ ರೆಡ್ಡಿಗೆ ಚಿತ್ತನೆಟ್ಟಿದ್ದಾರೆ. ಆದ್ದರಿಂದಲೇ ಕಳೆದ ಎರಡು ದಿನಗಳ ಹಿಂದೆಯಷ್ಟೆ ಹಿರಿಯೂರಿನ ಬಿಜೆಪಿ ಸೇೇರಿದಂತೆ ಹಲವರನ್ನು ಭೇಟಿಯಾಗಿ ಕ್ಷೇತ್ರದ ಇತಿಹಾಸ ರಾಜಕೀಯ ಚಟುವಟಿಕೆಗಳ ಕುರಿತು ಚರ್ಚೆ ಮಾಡಿ ಹೋಗಿದ್ದಾರೆ. ಇದು ಚಿತ್ರದುರ್ಗ ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಹೊಸ ಸಂಚಲನ ಮೂಡಿಸುವುದಕ್ಕೆ ಕಾರಣವಾಗಿದೆ. ತಮ್ಮ ರಾಜಕೀಯ ಅಧಿಪತ್ಯವನ್ನು ಮತ್ತೆ ಸ್ಥಾಪಿಸಲು ಮುಂದಾಗಿರುವ ಅವರು, ಇದಕ್ಕಾಗಿ ಈಗ ತಮ್ಮ ಹೆಂಡತಿಯನ್ನು ಕಣಕ್ಕೆ ಇಳಿಸುವ ಮೂಲಕ ಮತ್ತೊಮ್ಮೆ ತಮ್ಮ ರಾಜಕೀಯ ವೇದಿಕೆ ತಯಾರು ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತು ದಟ್ಟವಾಗಿದೆ.

ಗಣಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿರುವ ಗಾಲಿ ಜನಾರ್ಧನ ರೆಡ್ಡಿಗೆ ಇಂದಿಗೂ ಬಳ್ಳಾರಿ ಪ್ರವೇಶ ಮಾಡಿಲ್ಲ. ಕಾರಣ ಅದಕ್ಕೆ ಕೋರ್ಟ್ ನೀಡಿರುವ ಕಟ್ಟಾಜ್ಞೆ. ಅಷ್ಟೆ ಅಲ್ಲದೇ ರಾಜಕೀಯ ಮಾಡೋಕೆ ಪಕ್ಷದಲ್ಲಿ ಸ್ಥಾನಮಾನವೂ ಇಲ್ಲವಾಗಿ ಸತತ ಎಂಟತ್ತು ವರ್ಷಗಳನ್ನ ಕಳೆದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆತ್ಮೀಯ ಸ್ನೇಹಿತ ಬಿ. ಶ್ರೀರಾಮುಲು ಗಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಹಗಲಿರುಳು ಚುನಾವಣೆ ಪ್ರಚಾರ ಮಾಡಿ ಗೆಲುವಿಗಾಗಿ ಶ್ರಮಿಸಿದ್ದರು .ಆಗಲೂ ಬಿಜೆಪಿ ಕೇಂದ್ರ ನಾಯಕ ಅಮಿತ್ ಶಾ ಜನಾರ್ಧನರೆಡ್ಡಿಗೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲಿಂದ ರಾಜಕೀಯ ಪುನರ್ ಪ್ರವೇಶಕ್ಕೆ ಜನಾರ್ಧನ ರೆಡ್ಡಿ ಮೆಗಾ ಪ್ಲಾನ್ ನಡೆಸಿದ್ದು, 2023ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜುಮಾಡುವ ಯತ್ನ ನಡೆಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಆತ್ಮೀಯ ಸ್ನೇಹಿತ ಬಿ. ಶ್ರೀರಾಮುಲು ಅವರ ರಾಜ್ಯ ರಾಜಕಾರಣಕ್ಕೆ ಕಾರಣವಾದ ಚಿತ್ರದುರ್ಗ ಜಿಲ್ಲೆಯ ಹಿರಿಯೂರನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿ ತಮ್ಮ ಹೆಂಡತಿ ಅರುಣಾರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಕುರಿತು ಚಿಂತನೆ ನಡೆಸಿದ್ದಾರೆ. ಆದ್ದರಿಂದ ಕಳೆದ ಭಾನುವಾರ ಹಿರಿಯೂರು ವಾಣಿವಿಲಾಸ ಸಾಗರ ಬಳಿಯ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿದ್ದರು.
ಅಲ್ಲದೇ ಗೆಳಯ ಸಚಿವ ಬಿ.ಶ್ರೀರಾಮುಲು ಆಪ್ತಸಹಾಯಕ ಮಂಜು ಸ್ವಾಮಿ ಫಾರ್ಮ್ ಹೌಸಲ್ಲಿ ಹಿರಿಯೂರು ತಾಲೂಕಿನ ಹಲವು ಮುಖಂಡರನ್ನ ಸೇರಿಸಿಕೊಂಡು ಚುನಾವಣೆ ಕುರಿತು ಚರ್ಚೆ ಕೂಡಾ ಮಾಡಿದ್ದಾರೆ. ಅರುಣಾರನ್ನು ಕಣಕ್ಕಿಳಿಸಿದರೆ ಗೆಲವಿನ ಸಹಕಾರಿ ಏನು ಅನ್ನೋ ವಿಷಯಗಳನ್ನ ಕ್ರೋಢಿಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಮುಖಂಡರಿಗೆ ತಿಳಿಸಿದ್ದಾರೆ.ಈ ಬೆಳವಣಿಗೆಯಿಂದ ಜಿಲ್ಲಾ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಪ್ರಾರಂಭವಾಗಿದೆ.