ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಇದೀಗ ಅತೀ ವೇಗವಾಗಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಮೇಘಾಲಯಗಳ ಸಾಲಿಗೆ ಇದೀಗ ಕರ್ನಾಟಕ ಕೂಡ ಸೇರಿಕೊಂಡಂತಾಗಿದೆ. ರಾಜ್ಯದಲ್ಲಿ ಕೇವಲ 10 ದಿನದಲ್ಲಿಯೇ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ.
ರಾಜ್ಯ ವಾರ್ ರೂಮ್ ನೀಡಿರುವ ಪ್ರಕಾರ, ಸೋಂಕಿತರ ಸಂಖ್ಯೆ ತಮಿಳುನಾಡು ರಾಜ್ಯದಲ್ಲಿ 2 ದಿನಗಳು, ಮಹಾರಾಷ್ಟ್ರದಲ್ಲಿ 21 ದಿನಗಳು ಹಾಗೂ ದೆಹಲಿಯಲ್ಲಿ 29 ದಿನಗಳು ದ್ವಿಗುಣಗೊಳ್ಳಲು ಕಾಲಾವಕಾಶ ತೆಗೆದುಕೊಳ್ಳುತ್ತಿದ್ದರೆ, ರಾಜ್ಯದಲ್ಲಿ ಕೇವಲ 10 ದಿನದಲ್ಲಿ ದ್ವಿಗುಣಗೊಳ್ಳುತ್ತಿದೆ ಎಂದು ಹೇಳಿದೆ.
ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ರಾಜ್ಯದಲ್ಲಿ ಜನರು ಎಷ್ಟರ ಮಟ್ಟಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ, ಮಾಸ್ಕ್ ಗಳನ್ನು ಎಷ್ಟರ ಮಟ್ಟಿದೆ ಧರಿಸುತ್ತಿದ್ದಾರೆಂಬುದನ್ನು ತೋರಿಸುತ್ತದೆ. ಸೋಂಕಿತರ ಸಂಖ್ಯೆಯಲ್ಲಿ ರಾಜ್ಯವು 11ನೇ ಸ್ಥಾನವನ್ನು ಪಡೆದುಕೊಂಡಿದ್ದು, ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ರಾಜ್ಯದಲ್ಲಿ 16 ದಿನಗಳಿಗೊಮ್ಮೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿತ್ತು. ನಂತರ ಬಳಿಕ 15 ದಿನಗಳಿಗೊಮ್ಮೆ ಇಳಿಯಿತು. ಇದೀಗ 9 ದಿನಗಳಿಗೆ ತಲುಪಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೋಡಲ್ ಅಧಿಕಾರಿ ಡಾ.ಸಿಎನ್ ಮಂಜುನಾಥಅ ಅವರು ಮಾತನಾಡಿ, ದ್ವಿಗುಣಗೊಳ್ಳುತ್ತಿರುವ ಸಂಖ್ಯೆಯು ವೈರಸ್ ಸಮುದಾಯ ಹಂತವನ್ನು ತಲುಪಿರುವುದನ್ನು ಸೂಚಿಸುತ್ತದೆ. ಕೇವಲ 10-15 ದಿನಗಳಲ್ಲಿ 15,000 ಇದ್ದ ಪರೀಕ್ಷೆಗಳ ಸಂಖ್ಯೆ ಇದೀಗ 35,000ಕ್ಕೆ ಏರಿಕೆಯಾಗಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗದೆ ಸೋಂಕಿತರ ಸಂಖ್ಯೆ ದ್ವಿಗುಣಗೊಂಡರೆ, ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ನಾವು ಇದೀಗ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.