ಬೆಂಗಳೂರು: ಕೊರೋನಾ ಸೋಂಕು ಜೊತೆಗೆ ಭ್ರಷ್ಟಾಚಾರದ ಸೋಂಕು ಸಹ ವ್ಯಾಪಕವಾಗಿ ಹರಡಿದ್ದು, ಹೆಣದ ಮೇಲೆ ಹಣ ಮಾಡಲು ರಾಜ್ಯ ಬಿಪೆಪಿ ಸರ್ಕಾರ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನಮ್ಮ ಬಳಿ ಸಹಕಾರ ಕೇಳಿತ್ತು. ನಾವು ಎಲ್ಲ ರೀತಿಯ ಬೆಂಬಲ ಕೊಟ್ಟಿದ್ದೇವೆ. ಸರ್ಕಾರದ ಆಟಗಳನ್ನೆಲ್ಲ 120 ದಿನ ಸಹಿಸಿಕೊಂಡಿದ್ದೇವೆ. ಆದರೆ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಬೆಂಗಳೂರು ಉಸ್ತುವಾರಿಗೆ ನಿಯೋಝನೆಗೊಂಡಿರುವ 9 ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಒಬ್ಬ ಮಂತ್ರಿಯೂ ಆಸ್ಪತ್ರೆಗೆ ಹೋಗಿ ಸೋಂಕಿತರನ್ನು ವಿಚಾರಿಸಲಿಲ್ಲ. ಸೋಂಕಿಗೆ ತುತ್ತಾದವರಿಗೆ ಧೈರ್ಯ ತುಂಬಲಿಲ್ಲ. ಸತ್ತವರನ್ನು ಕೀಳಾಗಿ ನೋಡಿಕೊಳ್ಳಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಈ ಸರ್ಕಾರಕ್ಕೆ ಯಾವುದೇ ಸ್ಪಷ್ಡ ಗುರಿ ಇಲ್ಲ. ಇದು ಕೇವಲ ಭ್ರಷ್ಟಚಾರದ ಸರ್ಕಾರ.ನಾವು ಸರ್ವ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಿದ ಮೇಲೆ ನೆಪಮಾತ್ರಕ್ಕೆ ಸಭೆ ಕರೆದರು. ಸರ್ಕಾರದ ಆಹಾರದ ಕಿಟ್ ಗಳ ಮೇಲೆ ಬಿಜೆಪಿ ನಾಯಕರು ತಮ್ಮ ಹೆಸರು ನಮೂದಿಸಿ ಕಿಟ್ ಹಂಚಿದ್ದಾರೆ. ಕಾರ್ಮಿಕರಿಗೆ 1200 ರೂ ಕೊಟ್ಟು ಊಟ ಒದಗಿಸಿರುವುದಾಗಿ ಲೆಕ್ಕ ನೀಡಿದ್ದಾರೆ. ಯಾವ ಫೈವ್ ಸ್ಟಾರ್ ಹೋಟೆಲ್ ನಿಂದ ಊಟ ಕಳಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಶಿವಕುಮಾರ್ ಕುಟುಕಿದರು.
ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. 110 ದಿನ ಆದ ಮೇಲೆ ಖಾಸಗಿ ಆಸ್ಪತ್ರೆಯವರನ್ನು ಕರೆದು ಮಾತನಾಡುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆ ಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವೃತ್ತಿಪರರಿಗೆ 5000 ರೂ. ಕೊಡುವುದಾಗಿ ಹೇಳಿದ್ದರು. ಆದರೆ ಪರಿಹಾರ ಶೇ. 10 ರಷ್ಟು ಜನರಿಗೆ ತಲುಪಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಅಲ್ಲದೇ ಪ್ರತಿಭಟನಾನಿರತರನ್ನು ಕರೆದು ಮಾತನಾಡುವ ಸೌಜನ್ಯವೂ ಈ ಸರ್ಕಾರಕ್ಕೆ ಇಲ್ಲ.ಪೌರ ಕಾರ್ಮಿಕರಿಗೆ ಜೀವನದ ರಕ್ಷಣೆಯಿಲ್ಲ.